top of page

ಸಂಸ್ಥಾಪಕರ ಸಂದೇಶ 

ನಮ್ಮ ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆ ನೀಡುವ ಮೂಲಕ ಶ್ರೇಷ್ಠ ದೇಶ ಕಟ್ಟುವ ಗುರಿಯೊಂದಿಗೆ ಸಮಾನ ಮನಸ್ಕ ವ್ಯಕ್ತಿಗಳು ಸೇರಿಕೊಂಡು ಈ ಸಂಘಟನೆಯನ್ನು ಪ್ರಾರಂಭಿಸಲಾಗಿದೆ.ಇದನ್ನು ಸಾಧಿಸಲು ಪ್ರಾಮಾಣಿಕ ಸಂಭಾಷಣೆ,ಮುಕ್ತ ಸಂವಾದ ಹಾಗು ನಾವು ಬಯಸುವ ಬದಲಾವಣೆ ನಮ್ಮಿಂದಲೇ ಪ್ರಾರಂಭಿಸುವ ಸಂಸ್ಕೃತಿಯನ್ನು ಹುಟ್ಟುಹಾಕುವ ಗುರಿಯನ್ನು ನಾವು ಇರಿಸಿಕೊಂಡಿದ್ದೇವೆ.ಭ್ರಷ್ಟಾಚಾರ,ಹೊಣೆಗಾರಿಕೆಯ ಕೊರತೆ,ಶೂನ್ಯ ಪ್ರಭುದ್ಧ ನಾಯಕತ್ವದ ಜೊತೆಗೆ ನಮ್ಮ ರಾಷ್ಟ್ರೀಯತೆಗೆ ನಿರಾಶಾದಾಯಕತೆಯನ್ನು ಜೋಡಿಸುತ್ತಿರುವುದು ನಮ್ಮ ಶಾಪವಾಗಿ ಪರಿಣಮಿಸಿದೆ. 

ಗ್ರಾಮೀಣ ಭಾಗಗಳಲ್ಲಿ ಬದುಕುತ್ತಿರುವ ದೊಡ್ಡ ಪ್ರಮಾಣದ ಪ್ರತಿಭೆಗಳಿಗೆ ತಮ್ಮನ್ನು ಅಭಿವ್ಯಕ್ತಿ ಪಡಿಸಿಕೊಳ್ಳಲು ಸೂಕ್ತವೇದಿಕೆ ಲಭಿಸುತ್ತಿಲ್ಲ. ತುಂಬಾ ಸಮಯಗಳಿಂದ ಅವರ ಧ್ವನಿ ಕೇಳಿಸದೆ ದುರ್ಬಲವಾಗುತ್ತಿದೆ.ಇಂದಿನ ಅಭಿವೃದ್ಧಿಯ ಪಥ ಸಿರಿವಂತ ಹಾಗು ಬಡವರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸುತ್ತಲಿದೆ.ಈಗಿನ ಬೆಳವಣಿಗೆಯ ಪಥವನ್ನು ಆದಷ್ಟು ಬೇಗ ಸರಿದಾರಿಗೆ ತರದಿದ್ದಲ್ಲಿ ಸರಕಾರಗಳ ಸದುದ್ದೇಶದ ಹೊರತಾಗಿಯು ಇತ್ತೀಚಿನ ದಶಕಗಳ ಬೆಳವಣಿಗೆ ನಿರರ್ಥಕವಾಗಲಿದೆ.ಅತ್ಯಂತ ಆಶ್ಚರ್ಯಕರ ವಿಷಯ ಏನೆಂದರೆ ಭ್ರಷ್ಟಾಚಾರಾದ ಜೊತೆಗೆ ಜನರು ಹೊಂದಿಕೊಂಡು ಹೋಗುವುದನ್ನು ಜೀವನ ವಿಧಾನ ಎನ್ನುವಂತೆ ರೂಢಿಸಿಕೊಂಡಿದ್ದಾರೆ.ಜೊತೆಗೆ ರಾಜಕೀಯ ಕಛೇರಿಗಳಲ್ಲಿ ನಾಯಕತ್ವಕ್ಕೆ ಬೇಕಾದ ಪರಿಮಿತಿ ಕೆಳಮಟ್ಟದಲ್ಲಿರುವುದರಿಂದ ಅನಪೇಕ್ಷಿತ ವ್ಯಕ್ತಿಗಳು ಅಧಿಕಾರ ಪಡೆಯಲು ಸಾಧ್ಯವಾಗುತ್ತಿದೆ.

K.Annamalai_Chief Servant_We The Leaders Foundation

Annamalai K

Chief Servant

ನನ್ನ ಇತ್ತೀಚಿನ ಕಥೆ

ಕಳೆದ ಆರು ತಿಂಗಳಿಂದ ನಾನು ವ್ಯಯಕ್ತಿಕವಾಗಿ ಈ ಹಿಂದಿನ ವೃತ್ತಿ ಜೀವನದ ಜಂಜಾಟದಿಂದ ದೂರವಿದ್ದು ವ್ಯಾಪಕವಾಗಿ ದೇಶ,ರಾಜ್ಯ, ಹಾಗು ಗ್ರಾಮಗಳಿಗೆ ಸುತ್ತಾಡುತ್ತಿದ್ದೇನೆ. ಶ್ರೀ ಸಾಮಾನ್ಯರ ಜೊತೆಗೆ ಸಂವಾದ ಹಾಗೂ ಸಂಕೀರ್ಣಗಳೊಂದಿಗೆ ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಆಳವಾದ ಸಂಪರ್ಕದಲ್ಲಿದ್ದೇನೆ .ಮುಖ್ಯವಾಗಿ ಒಂದು ವಿಷಯ ಈ ಪ್ರಯಾಣದಲ್ಲಿ ನಾನು ತಿಳಿದುಕೊಂಡಿದ್ದು ಏನೆಂದರೆ ನಾವೆಲ್ಲರೂ ನಮ್ಮವರನ್ನು ನಮ್ಮೊಂದಿಗೆ ತೆಗೆದುಕೊಂಡು ಬರುವ ಸಭ್ಯತೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಮೂಲದಲ್ಲಿ ಸರಳತೆಯಿಂದ ತನ್ನನ್ನು ತಾನು ಕಟ್ಟಿಕೊಂಡಿರುತ್ತಾನೆ. ಈ ಮಾಂತ್ರಿಕತೆ ನಮ್ಮಲ್ಲಿ ಹಲವರಲ್ಲಿ ಇರುವುದನ್ನು ನಾನು ಕಂಡಿದ್ದೇನೆ. ವರುಷಗಳು ಉರುಳಿದಂತೆ ಈ ಸರಳತೆಗೆ ಹಲವಾರು ಅಡಚಣೆಗಳು ಬಂದು ಒದಗುತ್ತವೆ.ಅಂದರೆ ಭ್ರಷ್ಟಾಚಾರದ ಇರುವಿಕೆಯ ಅನುಭವ, ಮಾತು ಕೃತಿಗಳಲ್ಲಿ ವ್ಯತ್ಯಸ್ಥರಾದ ರಾಜಕಾರಣಿಗಳು, ನಾವು ಭರಿಸುವ ತೆರಿಗೆಗಳಿಗೆ ಪ್ರತಿಫಲವಾಗಿ ಶೂನ್ಯ ಲಭಿಸಿದಾಗ,ಮುಖ್ಯವಾಗಿ ಧರ್ಮದ ಹೆಸರಿನಲ್ಲಿ ನಾವು ವಿಭಾಗವಾದಾಗ,ಅಥವಾ ಭಾರತೀಯರಾಗಿ ನಾವು ಕಾಣದೇ ಇರುವಂತಹ ಇತರೆ ಸಾವಿರ ವಿಭಜನೆಗಳು ಎದುರಾದಾಗ,ಅಥವಾ ತಮಿಳಿಗ, ಕನ್ನಡಿಗ ಮೊದಲಾದ ಇತರೆ ಭಾಷೆಗಳಿಂದ ಗುರುತಿಸಿಕೊಂಡಾಗ,ಇವೆಲ್ಲವು ನಮ್ಮನ್ನು ಅಧಃಪಥನಕ್ಕೆ ದೂಡಿವೆ, ಭ್ರಷ್ಟಾಚಾರವನ್ನುಒಪ್ಪುವಂತೆ ಮಾಡಿವೆ .ಇವುಗಳಿಂದ ನಮ್ಮನ್ನು ರಕ್ಷಿಸಲು ಯಾರೋ ಉದ್ಧಾರಕ ನಮ್ಮಲ್ಲಿಗೆ ಬರುವನೆಂಬ ಕಾತರತೆಯಿಂದ ನಾವು ಇರುತ್ತೇವೆ.ಆಶ್ಚರ್ಯಕರ ವಿಷಯವೇನೆಂದರೆ ನಾವು ಒಂದು ಬಾರಿ ಸ್ವ ವಿಮರ್ಷೆ ಮಾಡಿಕೊಳ್ಳದೆ ಜೀವನ ವಿಧಾನವಾಗಿ ಎಷ್ಟು ಸುಲಭವಾಗಿ ಒಪ್ಪಿಕೊಂಡಿದ್ದೇವೆ!

 

ತಂತ್ರಜ್ಞಾನ ಹಾಗೂ ವಿಭಜನೆ :
ತಂತ್ರಜ್ಞಾನ ನಮ್ಮ ಜೀವನವನ್ನು  ವ್ಯಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಸರಳಗೊಳಿಸಿದಂತೆ ಒಂದಷ್ಟು ಅಪಾಯಗಳನ್ನು ಕೂಡಾ ತಂದೊಡ್ಡಿದೆ. ಬಹಳ ಬೇಗನೆ ನಾವು ದಿಕ್ಕು ತಪ್ಪುತ್ತಿದ್ದೇವೆ. ಅತಿರೇಕದ ದೃಷ್ಟಿಕೋನಗಳು ದಿನಚರಿಗಳಾಗುತ್ತಿವೆ.ಸಾಮಾಜಿಕ ಜಾಲತಾಣದ ಸಂವಹನಗಳು ನಮ್ಮನ್ನು ಬಹಳ ಬೇಗನೆ ಭಾವನಾತ್ಮಕವಾಗಿ ಹಾಗು ಅತಾರ್ಕಿಕವಾಗಿ ಚಿಂತಿಸುವಂತೆ ಮಾಡುತ್ತಿವೆ.ನಾವು ಒಂದಾಗಿರುವುದಕ್ಕಿಂತ ಹೆಚ್ಚಾಗಿ ನಾವು ವಿಭಜಿತರಾಗಿರುತ್ತೇವೆ. ಮುಖ್ಯವಾಗಿ ನಾವು ಮನುಷ್ಯರೆಂಬ ಭಾವದಿಂದ ದೂರ ಸಾಗುತ್ತಿದ್ದೇವೆ. ಕೆಲವೊಂದು ಸಾಧನಗಳು ನಮ್ಮ ಮೇಲೆ ಪ್ರಾಭಲ್ಯ ಸಾಧಿಸುತ್ತಿವೆ. ಉದಾಹರಣೆಗೆ ವಾಟ್ಸ ಆಪ್,ಫೇಸ್ ಬುಕ್ ಗಳಂತಹ ತಂತ್ರಜ್ಞಾನಗಳ ವೇದಿಕೆಗಳಿಗೆ ನಾವು ಕ್ರಮೇಣ ದಾಸರಾಗುತ್ತಿದ್ದೇವೆ. ಈ ದಾಸ್ಯದಿಂದ ನಾವು ಮುಕ್ತರಾಗಿ ಎಲ್ಲರೊಂದಿಗೆ ನಾವು ಮತ್ತೆ ಹತ್ತಿರವಾಗಬೇಕಿದೆ.

 

ನಮ್ಮ ಗೆಲುವು ಹಾಗೂ ಸೋಲು ಎಲ್ಲಿ:
ಒಂದು ರಾಷ್ಟ್ರವಾಗಿ ನಾವು ಬಹಳಷ್ಟು ಮುಂದುವರಿದಿದ್ದೇವೆ. ಲಕ್ಷಗಟ್ಟಲೆ ಜನರನ್ನು ಬಡತನದಿಂದ ಮೇಲೆತ್ತಿದ್ದೇವೆ.ಹಸಿವಿನಿಂದ ಮುಕ್ತರನ್ನಾಗಿ ಮಾಡಿದ್ದೇವೆ, ವಿಶ್ವ ದರ್ಜೆಯ ಕಂಪನಿಗಳನ್ನು ಕಟ್ಟಿದ್ದೇವೆ, ಉತ್ತಮವಾದ ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದ್ದೇವೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯ ಜೊತೆಗೆ ಮುಖ್ಯವಾಗಿ ಆರ್ಥಿಕತೆ ಪುಟಿದೆದ್ದಿದೆ.ನಮ್ಮ ನಾಯಕರು ಸಾಧ್ಯವಾದಷ್ಟು ಮಡಿದ್ದರು ಮಾಡಬೇಕಾಗಿರುವುದು ಬಹಳವಿದೆ. ನಾವು ಮೂರು ವಿಷಯಗಳಲ್ಲಿ ಸೋತಿದ್ದೇವೆ. ಆರೋಗ್ಯ, ಉತ್ತಮ ಶಿಕ್ಷಣ ಹಾಗೂ ಗುಣಮಟ್ಟದ ಸಾರ್ವಜನಿಕ ಜೀವನ ಹೊಂದಿರುವ ನಾಯಕರುಗಳು. ಅಭಿವೃದ್ಧಿ ಸಾಧಿಸಿರುವ ದೇಶಗಳಲ್ಲಿ ಇವು ಸರಿಯಾಗಿವೆ. ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಬೇಳೆಯಬಹುದೆಂಬ ನಿರ್ಧಾರ ಹೆತ್ತವರ ಸಾಮರ್ಥ್ಯದ ಮೇಲೆ ನಿರ್ಧಾರವಾಗಬಾರದು.ಬಡ ಮತ್ತು ಶ್ರೀಮಂತರ ಮಕ್ಕಳಿಬ್ಬರಿಗೂ ಬೆಳೆಯಲೂ ಹಾಗೂ ತಮ್ಮ ಜೀವನವನ್ನು ಕಂಡುಕೊಳ್ಳಲು ಸಮಾನ ಅವಕಾಶ ಲಭಿಸುವಂತಾಗಬೇಕು. ಇಲ್ಲದಿದ್ದರೆ ಕಾಲುಗಳನ್ನು ಕಟ್ಟಿಹಾಕಿ ಓಡಲು ಹೇಳಿದಂತಾಗುತ್ತದೆ. ನಾನು ನಂಬಿದಂತೆ ಇದು ಸರ್ಕಾರದ ಜವಾಬ್ದಾರಿ ಹಾಗು ಈ ವಿಷಯದಲ್ಲಿ ನಾವು ಬಹಳಷ್ಟು  ವಿಫಲರಾಗಿದ್ದೇವೆ. 

 

ನಮ್ಮನ್ನು ಸಾಮಾಜಿಕ ಜೀವನದಲ್ಲಿ ಪ್ರತಿನಿಧಿಸುವವರ ಜೀವನದ ಗುಣಮಟ್ಟಕ್ಕೆ ಬಂದರೆ, ಅವರ ಬಗ್ಗೆ ಕಡಿಮೆ ಮಾತನಾಡಿದಷ್ಟು ನಮಗೆ ಒಳ್ಳೆಯದು. ಅವರನ್ನು ದೋಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾರಣ ಪ್ರತಿಯೊಬ್ಬರಿಗು ಸಿಗುವ ಪ್ರೇರಣೆಗಳು  ಹಾಗು ಬೆಳೆದು ಬಂದ ರೀತಿ ವ್ಯತ್ಯಸ್ಥವಾಗಿರುತ್ತದೆ. ವಿವಿಧ ರೀತಿಯ ಮನಸ್ಸುಗಳಿರುತ್ತವೆ.ಕೆಲವರು ತಮ್ಮಲ್ಲಿರುವ ಅಕ್ರಮ ಸಂಪತ್ತಿನ ರಕ್ಷಕರಾಗಿದ್ದಾರೆ. ಮತ್ತೆ ಕೆಲವರು ಅಕ್ರಮ ಸಂಪತ್ತಿನ ಗಳಿಕೆಯಲ್ಲಿರುತ್ತಾರೆ. ಇನ್ನು ಕೆಲವರು ಈ ಎರಡನ್ನು ಮಾಡುವವರಿದ್ದಾರೆ. ಈ ವ್ಯವಸ್ಥೆಯ ಜೊತೆಗೆ ಇನ್ನು ಕೆಲವು ವ್ಯಕ್ತಿಗಳಿದ್ದಾರೆ. ಅವರು ನಿಜವಾದ ಮನಸ್ಸಿನಿಂದ ವ್ಯವಸ್ಥೆಗೆ ಹಿಡಿದ ದೋಷವನ್ನು ಸರಿಮಾಡುವ ಪ್ರಯತ್ನ ನಡೆಸುತ್ತಾರೆ. ಇದಕ್ಕೆಲ್ಲ ಸಾಮಾಜಿಕವಾಗಿ  ಹಾಗು ಆರ್ಥಿಕವಾಗಿ ಇರುವ ಕಾರಣಗಳನ್ನು ಹುಡುಕುವುದಕ್ಕೂ ಮುನ್ನ, ಉತ್ತಮ ಸಮಾಜವನ್ನು ಪಡೆಯುವುದರ ಬಗ್ಗೆ ಚಿಂತಿಸುವುದು ಉತ್ತಮ. 


ಮುಂದಿನ ದಾರಿ:
ನಾವು ಒಂದು ತಂಡವಾಗಿ ಚಿಕ್ಕದಾದರೂ ಕಾರ್ಯ ಪ್ರವೃತ್ತರಾಗುತ್ತಿದ್ದೇವೆ.ದೇಶವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ನಿಸ್ಸಂಶಯವಾಗಿ ಕಾರ್ಯ ಪ್ರವೃತ್ತರಾಗುತ್ತೇವೆ. “ನವ ಭಾರತದ” ನಿರ್ಮಾಣಕ್ಕಾಗಿ ನಾವು ಮೂರು ಭಾಗಗಳಲ್ಲಿ ಕಾರ್ಯ ಪ್ರವೃತ್ತರಾಗುತ್ತಿದ್ದೇವೆ.

 

೧.ಕೌಶಲ್ಯ- ಮೊದಲನೇ ಹಂತದಲ್ಲಿ ಉದ್ಯೋಗ ಪಡೆಯುವದರಿಂದ ಎರಡನೆಯ ಹಂತದ ಉದ್ಯೋಗ ಸೃಷ್ಟಿಯವರೆಗೆ.

ಪದವಿಯ ಕೊನೆಯ ಹಂತದಲ್ಲಿರುವ ಮತ್ತು ಪದವಿ ಮುಗಿಸಿರುವ ಯುವಸಮುದಾಯಕ್ಕಾಗಿ ಕೌಶಲ್ಯ ಪಡೆಯಲು ಕಾರ್ಯಕ್ರಮಗಳನ್ನು ಪ್ರಾರಂಭಿಸಲಿದ್ದೇವೆ. ಇಂದಿನ ವಿದ್ಯಾಭ್ಯಾಸ ರಂಗ  ಮಾಡಬೇಕೆಂದಿರುವ ಸಂವಹನ ಕೌಶಲ್ಯದ ಬೆಳವಣಿಗೆ ವಿಮರ್ಶಾತ್ಮಕ ಚಿಂತನೆ ಸಾಮರ್ಥ್ಯ ಹಾಗು ಆತ್ಮ ವಿಶ್ವಾಸದ ವೃದ್ಧಿಗೆ ನೆರವಾಗುವಂತಹ ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುವುದು.ವಳ್ಳುವರ್ ಕಾಲೇಜ್ ಆಫ್ ಸಯನ್ಸ್ ಆಂಡ್ಯ್ ಮ್ಯಾನೆಜ್ ಮೆಂಟ್, ಕರೂರ್ ನೊಂದಿಗೆ ಈಗಾಗಲೇ ನಾವು ಪಾಲುದಾರಿಕೆ ಹೊಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಅಗತ್ಯವಾದಂತಹ ಸೌಲಭ್ಯಗಳೊಂದಿಗೆ ಅಲ್ಲಿನ ಸಭಾಮಂಟಪವನ್ನು( ಸೆಮಿನಾರ್ ಹಾಲ್) ನವೀಕರಿಸಲಾಗುತ್ತಿದೆ. ಒಂದು ಬಾರಿ ತರಬೇತಿ ಪೂರ್ಣವಾದ ಕೂಡಲೇ ಉದ್ಯೋಗಾವಕಾಶಗಳನ್ನು ಒದಗಿಸುವ ಚಿಂತನೆ ಇದೆ.

 

೨.ಅಭಿವೃದ್ಧಿಗಾಗಿ ಸಂವಾದ

ಈ ಸಂವಾದ ಸರಣಿಯಲ್ಲಿ ನಗರ ಪ್ರದೇಶಗಳಲ್ಲಿ ಲಭ್ಯವಿರುವ ಉತ್ತಮ ಮಾತುಗಾರರನ್ನು ಕರೆತಂದು ಗ್ರಾಮೀಣ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವ ಪ್ರಯತ್ನ ನಡೆಸಲಾಗುವುದು.ಸಮಂಜಸವಾದ ವಿಷಯಗಳ ಮೇಲೆ ಜಾಗೃತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು.ಉದಾಹರಣೆಗೆ- ರಾಷ್ಟ್ರೀಯ ಸಮಸ್ಯೆಗಳಿಗೆ ಒತ್ತು,ಉತ್ತಮ ರಾಜಕೀಯ ಹಾಗು ರಾಜಕೀಯ ನಾಯಕತ್ವ , ಸ್ಥಳೀಯ ಪ್ರದೇಶಗಳಲ್ಲಿನ ಅಭಿವೃದ್ಧಿಯ ಅಗತ್ಯತೆ ಮೊದಲಾದವು. ಹಾಗು ಉತ್ತಮ ಬರಹಗಾರರು ಮತ್ತು ಪ್ರೇಕ್ಷಕರಲ್ಲಿ ಹೊಸ ಚೈತನ್ಯ ಮತ್ತುಚಲನಶೀಲತೆಯನ್ನು ತುಂಬಲು ನವೀನ ಆಲೋಚನೆಗಳನ್ನು ಪ್ರಸ್ತುತಪಡಿಸಲಾಗುವುದು.ಕರೂರ್,ಕೊಯಂಬತ್ತೂರ್ ಹಾಗೂ ಮಂಗಳೂರಿನಲ್ಲಿ ಇದು ಅರ್ಧ ವಾರ್ಷಿಕದ ಕಾರ್ಯಕ್ರಮವಾಗಿರುವುದು.

 

೩. ೩.ಸಾವಯವ ಕೃಷಿ-ನಿಯಂತ್ರಿತವಾಗಿ ಅಗತ್ಯಗಳೊಂದಿಗೆ ಬದುಕುವುದರೊಂದಿಗೆ ಅಭಿವೃದ್ಧಿಯ ಮಾದರಿಯನ್ನು ಬದಲಾಯಿಸುವುದು.ನಾಗರಿಕತೆಯ ತೊಟ್ಟಿಲು ಎಂದು ಕರೆಯಲ್ಪಡುವ ಗ್ರಾಮೀಣ ಪ್ರದೇಶ ಸಾಮೂಹಿಕ ವಲಸೆಗಳಿಂದಾಗಿ ಕ್ರಮೇಣ ಜೀವಂತ ನರಕಗಳಾಗಿ ಮಾರ್ಪಾಡಾಗುತ್ತಿವೆ. ಗಾಂಧೀ ಜೀ ಹೆಳಿದ್ದರು-“ಭಾರತ ಅದರ ಗ್ರಾಮಗಳಲ್ಲಿ ಬದುಕುತ್ತಿದೆ” ಆದರೆ ಅದರ ಸೂಕ್ತ ನಿರೂಪಣೆ ಹೀಗಿರಬಹುದು, “ಭಾರತದ ಗ್ರಾಮಗಳು ಹೊಟ್ಟೆ ಮೇಲಾಗಿ ಬದುಕುತ್ತಿವೆ” ನಮ್ಮ ಹಲವಾರು ಅಜಾಗುರೂಕವಾದ ನೀತಿಗಳು ಹಾಗೂ ಪಾಶ್ಚಿಮಾತ್ಯದ ಕುರುಡು ಪ್ರೇಮ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನಾವು ನಮ್ಮ ಗಮನವನ್ನು ಪುನಃ ಕೃಷಿಯತ್ತ ತಿರುಗಿಸಲು ಬಯಸಿದ್ದೇವೆ.ಅದೂ ಕೂಡಾ ಸಾವಯವ ಕೃಷಿಗೆ. ಜನರಿಗೆ ಅವರ ಅಗತ್ಯತೆಗಳಿಗೆ ಅನುಗುಣವಾಗಿ ಶಿಕ್ಷಣ ನೀಡುವುದರ ಜೊತೆಗೆ ಪರ್ಯಾಯ ಹಾಗೂ ಭಾರತೀಯ ಜೀವನ ವಿಧಾನವನ್ನು ಕಲಿಸುವುದು.ಇದು ಮಾತುಕತೆ –ಪ್ರಯೋಗ-ಉತ್ತೇಜನ ಹಾಗೂ ಕೊನೆಯದಾಗಿ ಧನ ಸಹಾಯ ಈ ಮಾರ್ಗಗಳ ಮೂಲಕ ಇದು ಸಾಗಲಿದೆ. ಈ ಕಠಿಣ ಸವಾಲುಗಳನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ.

 

ಪ್ರಸ್ತುತ ನಾವು ಕಾರ್ಯಸಾಧನೆ ಯಲ್ಲಿ ತೊಡಗಿಸಿಕೊಂಡಿದ್ದೇವೆ, ಹಾಗೂ ಇನ್ನಷ್ಟು ವಿಕಸಿತರಾಗಲು ನಮ್ಮ ಉದ್ದೇಶವಿದೆ.  


ಬನ್ನಿ, ಕಾರ್ಯವನ್ನಾರಂಭಿಸೋಣ!!!

 

ಅಣ್ಣಾಮಲೈ ಕೆ
ಮುಖ್ಯ ಸೇವಕ

ವೀ ದ ಲೀಡರ್ಸ್ ಫೌಂಡೇಶನ್

bottom of page